Monday, 30 January 2017

ಸ್ನೇಹ ಹಸ್ತಾಕ್ಷರ

ಬಾಯಿ ನೋವು ಬಂದರೂ ಮುಗಿಯದಷ್ಟು ಮಾತುಗಳು, ಲೆಕ್ಕವಿಲ್ಲದಷ್ಟು ಸಂತೋಷ, ಒಂದಷ್ಟು ಹುಸಿಮುನಿಸಿನಲ್ಲಿ ಕಡಲ ಅಲೆಗಳಂತೆ ಉಕ್ಕಿ ಉಕ್ಕಿ ಬರುವ ಕನಸುಗಳು.. ಇದರ ಮಧ್ಯದಲ್ಲಿ ಮುಸ್ಸಂಜೆಯಾದಂತೆ ಅವನಿಗೆ ಕಾಡೋ ಅವಳ ನೆನಪುಗಳು...
ನಾ ಪಕ್ಕದಲ್ಲೇ ಇದ್ದರೂ, ಈ ಇಳಿ ಸಂಜೆಗೆ ಅವಳಿದ್ದರೇ ಚೆಂದ ಅಲ್ವೇನೇ.? ಎಂಬ ಅವನ ಮಾತಿಗೆ ಮುನಿಸು ತೋರಿ ಎದ್ದು ಬಂದವಳಿಗೆ, ಅವನು ಅವಳನ್ನು ಪ್ರೀತಿಸುವ ಬಗೆ ತುಂಬಾ ಕಾಡ್ತಿದೆ..
ಅದ್ಯಾಕೋ ಗೊತ್ತಿಲ್ಲ, ಒಂದಷ್ಟು ಹುಸಿಮುನಿಸುಗಳ ಸಂತೆಯಲ್ಲಿ ಎಲ್ಲೋ ಕಳೆದ್ಹೋಗಿರುವ ಅವನ ಪ್ರೀತಿಯನ್ನು ಹುಡುಕ ಹೊರಟವಳಿಗೆ ಬರೀ ಗೊಂದಲವೇ ಕಾಡ್ತಿದೆ.. ಇಬ್ಬರೂ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿದ್ದಾರೆ ನನ್ನ ಕಂಗಳಿಗೆ..
ಅವನಿಗೋ ಅವಳು ಮನಸು ಬಿಚ್ಚಿ ನಗುವ ನಗುವಿಷ್ಟ.. ಅವಳು ನೆನೆಯೋ ಮಳೆಯಿಷ್ಟ.. ಅವಳು ಹಾಡುವ ಹಾಡಿಷ್ಟ.. ಒಟ್ಟಿನಲ್ಲಿ ಅವಳಿಷ್ಟವೇ ಅವನಿಷ್ಟ.. ಅವಳಿಂದಲೇ ಇವನು ಎನ್ನೋ ಭಾವ..
ಒಬ್ಬರನೊಬ್ಬರು ಇಡಿ ಇಡಿಯಾಗಿ ಅರಿತು ಪ್ರೀತಿಸುತ್ತಿದ್ದ ಅವರ ಒಲವಿಗೆ ಅದ್ಯಾವ ದೃಷ್ಠಿ ತಗುಲಿತು ಎಂದು ಕೇಳೋಣವೆಂದರೆ, ಅವನು ಪ್ರೀತಿಯ ಉತ್ತುಂಗಕ್ಕೇರಿದ ಸೂಚನೆ.. ಉತ್ತರವಿಲ್ಲದ ಪ್ರಶ್ನೆಗಳು ನನ್ನಲ್ಲೇ ಮುದುರಿ ಕುಳಿತುಕೊಂಡು ಬಿಟ್ಟಿದೆ..
ಅವಳೆಂದರೆ ನಾನೇ ಎಂದುಕೊಂಡಿರುವ ಅವನಿಗೆ, ಅವಳ ಯಾವುದೋ ಅನಿವಾರ್ಯ ಕಾರಣಕ್ಕಾಗಿ ಕಾರಣವೇ ಹೇಳದೇ ಕಡಲಾಚೆಗೆ ಹೋದರೂ ಅವಳೆಂದರೆ ಬೆಟ್ಟದಷ್ಟು ಪ್ರೀತಿ.. ಹುಚ್ಚು ಪ್ರೀತಿ..
ಅವನು ಅವಳ ಪ್ರೀತಿಸುವ ಪರಿಗೇ, ನನಗೆ ಆತ್ಮೀಯನೆನೆಸಿಬಿಟ್ಟಿದ್ದಾನೆ..
ಕಡಲಾಚೆಗೇ ಇರಲಿ.. ಮೋಡದ ಮರೆಯಲ್ಲೇ ಇರಲಿ.. ಅವನ ಅವಳು ಇಳಿಸಂಜೆಗೆ ಅವನಿಗೆ ದನಿಯಾಗಬೇಕು.. ಅವಳ ಹಾಡಿಗೆ ಅವನು ಕಿವಿಯಾಗಬೇಕು.. ಅವಳ ನಗುವಿಗೆ ಅವನು ಸ್ವರವಾಗಬೇಕು..
ದೂರದಲ್ಲಿ ನಿಂತು ಅವರಿಬ್ಬರ ಪ್ರೀತಿಯ "ಸ್ನೇಹ ಹಸ್ತಾಕ್ಷರ"ವ ನನ್ನೆದೆಯ ಅಂತರಂಗದ ಭಾವನೆಯ ಪುಟಗಳಲ್ಲಿ ಉಳಿಸಿಕೊಳ್ಳಬೇಕು...... 

1 comment: