Friday 3 February 2017

ಕನಸುಗಳು ಮಾರಾಟಕ್ಕಿದೆ 

ಹೌದು.....!!!! ಕನಸುಗಳನೆಲ್ಲ ಮಾರಾಟಕಿಟ್ಟುಬಿಟ್ಟಿದ್ದೇನೆ..
ಅವನೊಂದಿಗೆ ಕಂಡ ಕನಸುಗಳೆಲ್ಲ ಕನಸಾಗಿಯೇ ಉಳಿಯುವುದೆಂದು ಅರಿತ ಮೇಲೂ ಕನಸುಗಳೊಂದಿಗೆ ನನದೇನು ಕೆಲಸ..??????
ಜೋಳಿಗೆಯ ಸೇರಿದ್ದ ಅವನ ಕನಸುಗಳ ಮಾರಿಬಿಡಬೇಕು.. ಬದುಕ ಸಂತಸದ ದಾರಿಯ ಹಿಡಿಯಬೇಕು.. ನಾ ಕಾಣದ ದೂರದೂರಿಗೆ ಕನಸುಗಳ ಮಾರಿ ಅವನಿಗೆ ನಾ ಮರೀಚಿಕೆಯಾಗಬೇಕು.. ಮತ್ತವನ ಕನಸುಗಳು ಬಾರದಂತೆ ಮೂಟೆಕಟ್ಟಿ ಬದುಕ ಸಂತೆಯಲ್ಲಿ ಮಾರಿಬಿಡಬೇಕು..
ಅವನ ಕನಸುಗಳನೆಲ್ಲ ಒಮ್ಮೆ ಹೊರಹಾಕಿ ನಾನೊಮ್ಮೆ ಏಕಾಂಗಿಯಾಗಬೇಕು.. ಅಲ್ಲೆಲ್ಲೋ ಭೋರ್ಗರೆವ ಶರಧಿಯ ಅಲೆಗಳೊಡನೆ ಯಾರ ಹಂಗೂ ಇಲ್ಲದೇ ಪ್ರೀತಿಯಾಟವಾಡಬೇಕು.. ದೂರ ತೀರದಲ್ಲಿ ಮೊರೆವ ನಗುವಿನೊಡನೆ ಕಾಲ ಕಳೆಯಬೇಕು.. ನನ್ನ ಮನದ ಪುಟಗಳಲಿ ಅಡಗಿರುವ ಭಾವಗಳ ಹೊರತೆಗೆದು ಅದಕ್ಕೆ ಹೊಸತನವ ನೀಡಬೇಕು.. ಹೊಸತನದ ಅಲೆಗಳಲಿ ಮಿಂದೆದ್ದು ಹಕ್ಕಿಗಳಿಂಪಿನ ಜತೆಯಲಿ ನಾನೂ ಹಾಡಬೇಕು..
ನೀರವ ಕತ್ತಲ ರಾತ್ರಿಗಳಲಿ ಹೊಸತೊಂದು ಭರವಸೆಯ ದೀವಟಿಗೆಯ ಹುಡುಕಬೇಕು.. ದೀವಟಿಗೆಯ ಬೆಳಕು ಕ್ಷೀಣಿಸುವ ಮುನ್ನ ನೀರವ ಕತ್ತಲ ರಾತ್ರಿಗಳಿಂದ ಜಾರಬೇಕು..ಜಾರಿದ ರಾತ್ರಿಗಳು ಹಿಂತಿರುಗದಂತೆ ಗೋಡೆಗಳ ಕಟ್ಟಬೇಕು.. ಅವನೇ ಜೀವ ನೀಡಿದ ಕನಸುಗಳ ಸಾಯಿಸಿದ ಅವನೂ ಮತ್ತೆಂದೂ ಹಿಂದಿರುಗದಂತೆ ಬೇಲಿಯನೂ ಹಾಕಬೇಕು.. ಹಾಕಿದ ಬೇಲಿಗಳಿಗೆ ಹೊಸ ತರು ಲತೆಗಳ ಹಬ್ಬಿಸಬೇಕು.. ತರು ಲತೆಗಳ ಮೇಲೆ ಮುತ್ತಂತೆ ಕೂರುವ ಇಬ್ಬನಿಯ ಹನಿಗಳ ನೋಡಿ ಮನ ತಂಪಾಗಬೇಕು.. ತಂಪಾದ ಮನಸು ಮನದಣಿಯೇ ಕುಣಿಯಬೇಕು..
ಕುಣಿದು ದಣಿದ ಮನಸು ಮತ್ತೆ ನವ ಚೈತನ್ಯದತ್ತ ತೇಲಬೇಕು, ಬದುಕು ನಿರಂತರತೆಯ ಹಾದಿಯಲಿ ನಿಲ್ಲದೇ ಸಾಗಬೇಕು, ಮರೀಚಿಕೆಯಂತೆ ಕಂಡ ಮರೀಚಿಕೆಯಲ್ಲದ ದೂರ ದೂರ ತೀರವ ನಗುವಿನೊಡನೆ ಸೇರಬೇಕು....
"ಕನಸುಗಳ ಮಾರುವ ನಿರೀಕ್ಷೆಯಲಿ
ಕಾದು ಕುಳಿತಿದೆ ಮನಸು
ಬಿಕರಿಯಾಗದ ಕನಸುಗಳ
ನೆನೆದು ಮರುಗುತಿದೆ ಮನಸು....."
- ಉಷಾ ಬೆಕ್ಮನೆ..

No comments:

Post a Comment