Friday, 3 February 2017

ಕನಸುಗಳು ಮಾರಾಟಕ್ಕಿದೆ 

ಹೌದು.....!!!! ಕನಸುಗಳನೆಲ್ಲ ಮಾರಾಟಕಿಟ್ಟುಬಿಟ್ಟಿದ್ದೇನೆ..
ಅವನೊಂದಿಗೆ ಕಂಡ ಕನಸುಗಳೆಲ್ಲ ಕನಸಾಗಿಯೇ ಉಳಿಯುವುದೆಂದು ಅರಿತ ಮೇಲೂ ಕನಸುಗಳೊಂದಿಗೆ ನನದೇನು ಕೆಲಸ..??????
ಜೋಳಿಗೆಯ ಸೇರಿದ್ದ ಅವನ ಕನಸುಗಳ ಮಾರಿಬಿಡಬೇಕು.. ಬದುಕ ಸಂತಸದ ದಾರಿಯ ಹಿಡಿಯಬೇಕು.. ನಾ ಕಾಣದ ದೂರದೂರಿಗೆ ಕನಸುಗಳ ಮಾರಿ ಅವನಿಗೆ ನಾ ಮರೀಚಿಕೆಯಾಗಬೇಕು.. ಮತ್ತವನ ಕನಸುಗಳು ಬಾರದಂತೆ ಮೂಟೆಕಟ್ಟಿ ಬದುಕ ಸಂತೆಯಲ್ಲಿ ಮಾರಿಬಿಡಬೇಕು..
ಅವನ ಕನಸುಗಳನೆಲ್ಲ ಒಮ್ಮೆ ಹೊರಹಾಕಿ ನಾನೊಮ್ಮೆ ಏಕಾಂಗಿಯಾಗಬೇಕು.. ಅಲ್ಲೆಲ್ಲೋ ಭೋರ್ಗರೆವ ಶರಧಿಯ ಅಲೆಗಳೊಡನೆ ಯಾರ ಹಂಗೂ ಇಲ್ಲದೇ ಪ್ರೀತಿಯಾಟವಾಡಬೇಕು.. ದೂರ ತೀರದಲ್ಲಿ ಮೊರೆವ ನಗುವಿನೊಡನೆ ಕಾಲ ಕಳೆಯಬೇಕು.. ನನ್ನ ಮನದ ಪುಟಗಳಲಿ ಅಡಗಿರುವ ಭಾವಗಳ ಹೊರತೆಗೆದು ಅದಕ್ಕೆ ಹೊಸತನವ ನೀಡಬೇಕು.. ಹೊಸತನದ ಅಲೆಗಳಲಿ ಮಿಂದೆದ್ದು ಹಕ್ಕಿಗಳಿಂಪಿನ ಜತೆಯಲಿ ನಾನೂ ಹಾಡಬೇಕು..
ನೀರವ ಕತ್ತಲ ರಾತ್ರಿಗಳಲಿ ಹೊಸತೊಂದು ಭರವಸೆಯ ದೀವಟಿಗೆಯ ಹುಡುಕಬೇಕು.. ದೀವಟಿಗೆಯ ಬೆಳಕು ಕ್ಷೀಣಿಸುವ ಮುನ್ನ ನೀರವ ಕತ್ತಲ ರಾತ್ರಿಗಳಿಂದ ಜಾರಬೇಕು..ಜಾರಿದ ರಾತ್ರಿಗಳು ಹಿಂತಿರುಗದಂತೆ ಗೋಡೆಗಳ ಕಟ್ಟಬೇಕು.. ಅವನೇ ಜೀವ ನೀಡಿದ ಕನಸುಗಳ ಸಾಯಿಸಿದ ಅವನೂ ಮತ್ತೆಂದೂ ಹಿಂದಿರುಗದಂತೆ ಬೇಲಿಯನೂ ಹಾಕಬೇಕು.. ಹಾಕಿದ ಬೇಲಿಗಳಿಗೆ ಹೊಸ ತರು ಲತೆಗಳ ಹಬ್ಬಿಸಬೇಕು.. ತರು ಲತೆಗಳ ಮೇಲೆ ಮುತ್ತಂತೆ ಕೂರುವ ಇಬ್ಬನಿಯ ಹನಿಗಳ ನೋಡಿ ಮನ ತಂಪಾಗಬೇಕು.. ತಂಪಾದ ಮನಸು ಮನದಣಿಯೇ ಕುಣಿಯಬೇಕು..
ಕುಣಿದು ದಣಿದ ಮನಸು ಮತ್ತೆ ನವ ಚೈತನ್ಯದತ್ತ ತೇಲಬೇಕು, ಬದುಕು ನಿರಂತರತೆಯ ಹಾದಿಯಲಿ ನಿಲ್ಲದೇ ಸಾಗಬೇಕು, ಮರೀಚಿಕೆಯಂತೆ ಕಂಡ ಮರೀಚಿಕೆಯಲ್ಲದ ದೂರ ದೂರ ತೀರವ ನಗುವಿನೊಡನೆ ಸೇರಬೇಕು....
"ಕನಸುಗಳ ಮಾರುವ ನಿರೀಕ್ಷೆಯಲಿ
ಕಾದು ಕುಳಿತಿದೆ ಮನಸು
ಬಿಕರಿಯಾಗದ ಕನಸುಗಳ
ನೆನೆದು ಮರುಗುತಿದೆ ಮನಸು....."
- ಉಷಾ ಬೆಕ್ಮನೆ..
ನೀ ಕಡಲಾದರೆ

ನೀ ಕಡಲಾದರೆ
ನಾನಾಗಬೇಕು ಮೀನು
ನಿನ್ನಾಳದಲ್ಲಿ ಹುದುಗಿರುವ
ಮುತ್ತನ್ನೆಲ್ಲ ನನ್ನದಾಗಿಸಲು
ನೀ ಆಕಾಶವಾದರೆ
ನಾನಾಗಬೇಕು ಭೂಮಿ
ನಿನ್ನಲ್ಲಿರುವ ಚಂದ್ರ ನಕ್ಷತ್ರಗಳ
ಬೆಳಕನ್ನೆಲ್ಲ ನನ್ನದಾಗಿಸಲು
ನೀ ಮಾತಾದರೆ
ನಾನಾಗಬೇಕು ಮೌನಿ
ನೀನಾಡದೇ ಉಳಿಸಿದ
ಮಾತುಗಳನ್ನೆಲ್ಲ ನನ್ನದಾಗಿಸಲು..
- ಉಷಾ ಬೆಕ್ಮನೆ

Tuesday, 31 January 2017



ಮನದ ಮೌನ 
ಮನದ ಹುಚ್ಚು ಕನವರಿಕೆಗಳ
ಪಟ್ಟಿ ಮಾಡಿ ಅವನಿಗೆ
ಕೊಡಬೇಕೆಂದುಕೊಂಡಾಗ
ಮನ ಮೌನದ ಮರೆಗೆ
ಸರಿದಿತ್ತು.....


ಅವನೊಂದಿಗೆ ಕಳೆದ ಆ ಮುದ್ದು
ನೆನಪುಗಳ ಕದ್ದೊಯ್ದು ಅವನೊಡನೆ
ಕದ್ದಾಲಿಸುವ ಎಂದುಕೊಂಡಾಗ
ಮನ ಮೌನದ ಮರೆಗೆ
ಸರಿದಿತ್ತು.....

ಹೊಸತೇನನ್ನೋ ಅವನಿಂದ ಬಯಸಿ
ಅವನಲ್ಲೇ ಲೀನವಾಗಬೇಕೆಂಬ
ಬಯಕೆ ಮೂಡಿದಾಗಲೇ
ಮನ ಮೌನದ ಮರೆಗೆ
ಸರಿದಿತ್ತು.....

ಏಕಾಂತದ ಸಂಜೆಯಲಿ ಕತ್ತಲೆಯ ಬಾಳಿನಲಿ
ನಂದದ ದೀಪವಾಗಿ ಕೈ ಹಿಡಿದು
ಜತೆಯಾಗು ಎಂದು ಹೇಳಬೇಕೆಂದಾಗ
ಮನ ಮೌನದ ಮರೆಗೆ
ಸರಿದಿತ್ತು.....

- ಉಷಾ ಬೆಕ್ಮನೆ

Monday, 30 January 2017



# ಕನಸು ಕನಸಾಗಿಯೇ ಉಳಿಯುವ ಮುನ್ನ #
ಕನಸುಗಳೇ ಹಾಗೆ, ಸವಿದಷ್ಟೂ ರುಚಿ ಹೆಚ್ಚೆ..
ಪ್ರತಿಯೊಂದು ಕನಸಿಗೂ ನೇಸರನ ಉದಯದ ಮುಂಚೆಯೇ ನನಸಾಗುವ ಹಂಬಲ..
ಇತ್ತೀಚೆಗೆ ನನಗೇ ಅರಿವಿಲ್ಲದಂತೆ ಕನಸಿಗೂ ನನಗೂ ಮಧ್ಯೆ ಇದ್ದ ಗೋಡೆ ಉರುಳಿ ಬಿದ್ದಂತಿದೆ..
ದಿನ ಉರುಳಿದಂತೆಲ್ಲ ಒಂದಕ್ಕೊಂದರಂತೆ ಅಂಟಿ ಸರಪಳಿಯಾಗುವ ಒಂದಿಷ್ಟು ಕನಸುಗಳು ಮನದಲ್ಲಿ..
ಭವಿತ್ಯವೆಂಬ ಸಂತೆಯಲ್ಲಿ ಅವನೊಟ್ಟಿಗೆ ಒಂದಿಷ್ಟು ಕನಸುಗಳ ಕೊಳ್ಳುವಾಸೆಯಾಗಿಬಿಟ್ಟಿದೆ ಹುಚ್ಚು ಮನಸಿಗೆ..
" ನಿನ್ನ ಒಂದಿಷ್ಟು ನೆನಪುಗಳು ನನ್ನ ಒಂದಿಷ್ಟು ನೆನಪುಗಳ ಕೂಡಿಸಿ, ಅದೇ ಕಲ್ಪನೆಯಲ್ಲಿ ಕನಸಿನರಮನೆಯ ಕಟ್ಟುವ ಬಾ " ಎಂಬ ಅವನ ಮಾತನ್ನ ಕೇಳಿದಾಗೆಲ್ಲ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತೆ ನನ್ನೀ ಹೃದಯ..
ಅವನದೇ ಕನಸಿನರಮನೆಯ ಒಡತಿಯಾಗಿ, ಅವನೆಲ್ಲಾ ನೋವಿಗೂ ಜೊತೆಯಾಗುವ ಕನಸು ಎಂದೋ ಕಂಡಂತಿದೆ..
ಇನ್ನೇನಿದ್ದರೂ ಮುಂಬರುವ ಎಲ್ಲ ನಾಳೆಗಳಲಿ ಅವನು ನನ್ನುಸಿರಿಗೆ ಜೀವ ತುಂಬಬೇಕಿದೆ..
ನನ್ನ ಮನದಲಿ ಮೂಡುವ ಪ್ರೀತಿಗೆಲ್ಲಾ ವಾರಸುದಾರನಾಗಬೇಕಿದೆ..
ಬರಿದಾಗಿರುವ ಭಾವಗಳಲಿ ಅವನೇ ಒರತೆಯಾಗಿ ಹೂ ಅರಳಿಸಬೇಕಿದೆ..
ಶೂನ್ಯವನ್ನೇ ಅರಸುತ್ತ ಹೊರಟಿರುವ ಮನಕೆ ಆವರ್ತ ಮಳೆಯಾಗಬೇಕಿದೆ..
ಕೊನೆಯಲಿ, ಅವನ ಮೊಗದಲೊಂದು ನಗುವ ಮೂಡಿಸಲು ನನ್ನೆಲ್ಲಾ ಖುಷಿ, ಪ್ರೀತಿಯ ಅವನಿಗೆ ಧಾರೆ ಎರೆಯಬೇಕಿದೆ,,,,,,
" ಕನಸು ಕನಸಾಗಿಯೇ ಉಳಿಯುವ ಮುನ್ನ "

- ಉಷಾ ಬೆಕ್ಮನೆ..

ಹೊಸ ದಿಗಂತ
ಕಡಲ ಅಂಗಳದಿ
ನೀರ ಅಲೆಗಳ ನಡುವೆ
ಹೊಂಬಣ್ಣಕ್ಕೆ ತಿರುಗಿ
ಈಗಷ್ಟೇ ಕಣ್ಣು ತೆರೆಯುತಿರುವ
ನೇಸರನ ಚಂದಕ್ಕೇ,
ನಮ್ಮದಲ್ಲದ ನಿನ್ನೆಗಳ
ಕಹಿ ನೆನಪುಗಳ ಅಳಿಸಿ
ನಮ್ಮದಾಗಲಿರುವ ನಾಳೆಗಳಲಿ
ಸಿಹಿ ನೆನಪುಗಳ ಬರೆಸಿ
ಶುಭ ಕೋರುವ ನಾವು
ಈ ಹೊಸ ದಿಗಂತಕ್ಕೆ...
ಶುಭೋದಯ... ಶುಭದಿನ...
- ಉಷಾ ಬೆಕ್ಮನೆ..
ಅಮ್ಮ.....😘
*********************
ಏನೋ ಬರೆಯಬೇಕೆಂಬ ಹಂಬಲದಿಂದ ಕುಳಿತವಳಿಗೆ ನೆನಪಾಗಿದ್ದು ಅಮ್ಮ..
ಅಮ್ಮಾ ಎಂಬ ಎರಡೇ ಎರಡಕ್ಷರದ ಪದಕ್ಕೆ ಅದೆಷ್ಟು ಶಕ್ತಿ ಇದೆ ಅಲ್ವಾ..? ಪ್ರತಿಯೊಬ್ಬರ ಜೀವನದಲ್ಲೂ ಬರುವ ಮೊದಲ ಆದರ್ಶ ಹೆಣ್ಣೆಂದರೇ ಅಮ್ಮ..
ಎಂದೂ ಬತ್ತದ ನಮ್ಮ ಜೀವನದ ಜೀವಸೆಲೆ ಅಮ್ಮ.. ತಾನು ಜನ್ಮ ನೀಡಿದ ಹಸುಗೂಸೆ ತನ್ನ ಜಗತ್ತೆಂದು ಭಾವಿಸಿ ತನ್ನದೆಲ್ಲವನ್ನುವ ಧಾರೆಯಿರುವ ಪ್ರೇಮಮಯಿ ಅಮ್ಮ.. ಕ್ಷಮಯಾಧರಿತ್ರಿ, ಮೊಗೆದಷ್ಟು ಮತ್ತೆ ಸಿಗುವ ಒಲವ ಸಾಗರ ಅಮ್ಮ.. ಸಂಯಮದ ಸಾಕಾರಮೂರ್ತಿ ಅಮ್ಮ.. ಒಡಲಲ್ಲಿ ಎಷ್ಟೇ ನೋವಿದ್ದರೂ ಅಡಗಿಸಿ ನಗುವ ಮಂದಸ್ಮಿತೆ ಅಮ್ಮ.. ನವ ಜೀವನಕ್ಕೆ ದಾರಿ ತೋರುವ ದಾರಿದೀಪ ಅಮ್ಮ..
ಅಳತೆಯನ್ನೇ ಮೀರಿದ ವಾತ್ಸಲ್ಯಕ್ಕೇ ಇನ್ನೊಂದು ಹೆಸರೇ ಅಮ್ಮ...
ಅದೆಷ್ಟೇ ಹೇಳಬೇಕೆಂದು ಅಂದುಕೊಂಡರೂ ಪದಗಳಿಗೆ ನಿಲುಕದ ವ್ಯಕ್ತಿ ಅಮ್ಮ..
ಪ್ರತಿಯೊಬ್ಬರ ಜೀವನದಲ್ಲೂ ಅಡಿಪಾಯವಾಗಿ, ಗುರುವಾಗಿ, ಸ್ನೇಹಿತೆಯಾಗಿ, ಗುರುವಾಗಿ, ತಾಯಿಯಾಗಿ ಪ್ರೀತಿಯನ್ನು ಮೊಗೆ ಮೊಗೆದು ಕೊಡುತ್ತಿರುವ ಎಲ್ಲಾ ಅಮ್ಮಂದಿರಿಗೂ ನನ್ನದೊಂದು ಸಲಾಂ.....
- ಉಷಾ ಬೆಕ್ಮನೆ
ಸ್ನೇಹ ಹಸ್ತಾಕ್ಷರ

ಬಾಯಿ ನೋವು ಬಂದರೂ ಮುಗಿಯದಷ್ಟು ಮಾತುಗಳು, ಲೆಕ್ಕವಿಲ್ಲದಷ್ಟು ಸಂತೋಷ, ಒಂದಷ್ಟು ಹುಸಿಮುನಿಸಿನಲ್ಲಿ ಕಡಲ ಅಲೆಗಳಂತೆ ಉಕ್ಕಿ ಉಕ್ಕಿ ಬರುವ ಕನಸುಗಳು.. ಇದರ ಮಧ್ಯದಲ್ಲಿ ಮುಸ್ಸಂಜೆಯಾದಂತೆ ಅವನಿಗೆ ಕಾಡೋ ಅವಳ ನೆನಪುಗಳು...
ನಾ ಪಕ್ಕದಲ್ಲೇ ಇದ್ದರೂ, ಈ ಇಳಿ ಸಂಜೆಗೆ ಅವಳಿದ್ದರೇ ಚೆಂದ ಅಲ್ವೇನೇ.? ಎಂಬ ಅವನ ಮಾತಿಗೆ ಮುನಿಸು ತೋರಿ ಎದ್ದು ಬಂದವಳಿಗೆ, ಅವನು ಅವಳನ್ನು ಪ್ರೀತಿಸುವ ಬಗೆ ತುಂಬಾ ಕಾಡ್ತಿದೆ..
ಅದ್ಯಾಕೋ ಗೊತ್ತಿಲ್ಲ, ಒಂದಷ್ಟು ಹುಸಿಮುನಿಸುಗಳ ಸಂತೆಯಲ್ಲಿ ಎಲ್ಲೋ ಕಳೆದ್ಹೋಗಿರುವ ಅವನ ಪ್ರೀತಿಯನ್ನು ಹುಡುಕ ಹೊರಟವಳಿಗೆ ಬರೀ ಗೊಂದಲವೇ ಕಾಡ್ತಿದೆ.. ಇಬ್ಬರೂ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿದ್ದಾರೆ ನನ್ನ ಕಂಗಳಿಗೆ..
ಅವನಿಗೋ ಅವಳು ಮನಸು ಬಿಚ್ಚಿ ನಗುವ ನಗುವಿಷ್ಟ.. ಅವಳು ನೆನೆಯೋ ಮಳೆಯಿಷ್ಟ.. ಅವಳು ಹಾಡುವ ಹಾಡಿಷ್ಟ.. ಒಟ್ಟಿನಲ್ಲಿ ಅವಳಿಷ್ಟವೇ ಅವನಿಷ್ಟ.. ಅವಳಿಂದಲೇ ಇವನು ಎನ್ನೋ ಭಾವ..
ಒಬ್ಬರನೊಬ್ಬರು ಇಡಿ ಇಡಿಯಾಗಿ ಅರಿತು ಪ್ರೀತಿಸುತ್ತಿದ್ದ ಅವರ ಒಲವಿಗೆ ಅದ್ಯಾವ ದೃಷ್ಠಿ ತಗುಲಿತು ಎಂದು ಕೇಳೋಣವೆಂದರೆ, ಅವನು ಪ್ರೀತಿಯ ಉತ್ತುಂಗಕ್ಕೇರಿದ ಸೂಚನೆ.. ಉತ್ತರವಿಲ್ಲದ ಪ್ರಶ್ನೆಗಳು ನನ್ನಲ್ಲೇ ಮುದುರಿ ಕುಳಿತುಕೊಂಡು ಬಿಟ್ಟಿದೆ..
ಅವಳೆಂದರೆ ನಾನೇ ಎಂದುಕೊಂಡಿರುವ ಅವನಿಗೆ, ಅವಳ ಯಾವುದೋ ಅನಿವಾರ್ಯ ಕಾರಣಕ್ಕಾಗಿ ಕಾರಣವೇ ಹೇಳದೇ ಕಡಲಾಚೆಗೆ ಹೋದರೂ ಅವಳೆಂದರೆ ಬೆಟ್ಟದಷ್ಟು ಪ್ರೀತಿ.. ಹುಚ್ಚು ಪ್ರೀತಿ..
ಅವನು ಅವಳ ಪ್ರೀತಿಸುವ ಪರಿಗೇ, ನನಗೆ ಆತ್ಮೀಯನೆನೆಸಿಬಿಟ್ಟಿದ್ದಾನೆ..
ಕಡಲಾಚೆಗೇ ಇರಲಿ.. ಮೋಡದ ಮರೆಯಲ್ಲೇ ಇರಲಿ.. ಅವನ ಅವಳು ಇಳಿಸಂಜೆಗೆ ಅವನಿಗೆ ದನಿಯಾಗಬೇಕು.. ಅವಳ ಹಾಡಿಗೆ ಅವನು ಕಿವಿಯಾಗಬೇಕು.. ಅವಳ ನಗುವಿಗೆ ಅವನು ಸ್ವರವಾಗಬೇಕು..
ದೂರದಲ್ಲಿ ನಿಂತು ಅವರಿಬ್ಬರ ಪ್ರೀತಿಯ "ಸ್ನೇಹ ಹಸ್ತಾಕ್ಷರ"ವ ನನ್ನೆದೆಯ ಅಂತರಂಗದ ಭಾವನೆಯ ಪುಟಗಳಲ್ಲಿ ಉಳಿಸಿಕೊಳ್ಳಬೇಕು...... 
ಹೀಗೊಂದು ಆಶಯ
ಒಮ್ಮೆ ಕಣ್ಣು ಕೋರೈಸುವಷ್ಟು
ಉರಿಯಬೇಕು ದೀಪಕ್ಕೆ ಬತ್ತಿಯಾಗಿ
ಬತ್ತಿಯೊಂದಿಗೆ ಸ್ನೇಹಗಳಿಸಲಿಕ್ಕಲ್ಲ
ನೋವಿಗೆ ಉತ್ತರವಾಗಿ ನಾನೆಷ್ಟು ಉರಿಯುಬಲ್ಲೆ ಎಂದು
ನನ್ನಲ್ಲಿ ನಾನೇ ಪ್ರಶ್ನಿಸಿಕೊಳ್ಳುವುದಕ್ಕಾಗಿ
ಒಮ್ಮೆ ಹೂವಿನ ಮಕರಂದವನ್ನೆಲ್ಲಾ
ತೊಟ್ಟು ಬಿಡದೇ ಹೀರಬೇಕು ಜೇನಾಗಿ
ಮಕರಂದವನ್ನೆಲ್ಲಾ ಸಿಹಿ ತುಪ್ಪವನ್ನಾಗಿಸಲಲ್ಲ
ನನ್ನ ಮನಸೆಷ್ಟು ಸಿಹಿ ಎಂದು
ನನ್ನನ್ನು ನಾನೇ ಮೆಚ್ಚಿಸಿಕೊಳ್ಳುವುದಕ್ಕಾಗಿ
ಒಮ್ಮೆ ಮನದುಂಬಿ ಹರಿಯಬೇಕು
ಹಾಲಿನ ನೊರೆಯಂತಿರುವ ನೀರಾಗಿ
ನೀರಿನಾಳದಲಿರುವ ಮೀನಾಗುವುದಕ್ಕಲ್ಲ
ನಿನ್ನ ನೆನಪುಗಳಲ್ಲಿರುವ ಮುತ್ತನ್ನು
ನನ್ನಲ್ಲಿ ನಾನೇ ಹುದುಗಿಸಿಕೊಳ್ಳುವುದಕ್ಕಾಗಿ
ಒಮ್ಮೆ ಮನದಣಿಯೇ ಸುತ್ತಬೇಕು
ಜಗದ ಸಂಚಾರಿಯಾಗಿ
ಯಾರೊಂದಿಗೋ ನನ್ನ
ಗುರುತಿಸಿಕೊಳ್ಳಲಾಗಿ ಅಲ್ಲ
ನನ್ನಲ್ಲಿ ನನ್ನನ್ನು ಕಂಡುಕೊಳ್ಳುವುದಕ್ಕಾಗಿ
ನನ್ನಲ್ಲಿಯ ನನ್ನನ್ನೇ ಮೀರಿಸುವುದಕ್ಕಾಗಿ..
- ಉಷಾ ಬೆಕ್ಮನೆ..
***** ಅಪ್ಪ *****

ಹೇಳಲಾಗದ ಎಷ್ಟೋ ಸಾಲು ಮನದಲ್ಲಿದೆ
ಹೇಳಲು ಹೋದರೆ ಕಂಬನಿ ಕಣ್ಣೀರ ತುಂಬುತ್ತದೆ
ಏನ ನೀಡಲಿ ನಾ ನೀನಿತ್ತ ಬದುಕಿಗೆ
ನೀನಿತ್ತ ಪ್ರೀತಿಗೆ, ನಿನ್ನ ತ್ಯಾಗಕೆ

ಕೈ ಹಿಡಿದು ನನ್ನ ಬದುಕಿಗೆ
ದಾರಿ ದೀಪವಾದೆ ನೀನು
ಜೊತೆಯಾಗಿ ನಿಂತರೆ ನೀನು
ಜಗವನೇ ಗೆಲ್ಲುವೆ ನಾನು

ನಿನ್ನ ನೆನೆಸಿಕೊಂಡಾಗೆಲ್ಲ ನನ್ನಲ್ಲಿ
ಮುಗುಳ್ನಗೆಯ ಹೊತ್ತು ತರುವೆ
ಹಸುಗೂಸ ಮುಗ್ದ ಮಗುವಾಗಿ
ಮತ್ತೆ ನನ್ನ ಮಡಿಲಲ್ಲಿ ಮಲಗುವೆ

ಅಪ್ಪ, ನೀನೆಂದರೆ ಪದಗಳಿಗೇ
ನಿಲುಕದ, ಚಂದದ ಅನುಭವ
ಎಷ್ಚು ವಂದಿಸಿದರೂ ಸಾಲದಷ್ಟು
ದೇವರು ಕೊಟ್ಟಿರುವ ವರ

ನಿನ್ನಂತೇ ಪ್ರೀತಿಸಿಲ್ಲ ಯಾರೂ ನನ್ನ
ಯಾರೂ ಕದಿಯಲಾಗದು ನಿನ್ನ ಪ್ರೀತಿಯನ್ನ
ನೀನಿಲ್ಲದೇ ನನ್ನ ಅಸ್ತಿತ್ವವೇ ಶೂನ್ಯ
ನಿನಗೆಂದೇ ಮುಡಿಪಿಡುವೆ ನನ್ನ ಜೀವವನ್ನ....

          - ಉಷಾ ಬೆಕ್ಮನೆ...