Monday, 30 January 2017

ಹೀಗೊಂದು ಆಶಯ
ಒಮ್ಮೆ ಕಣ್ಣು ಕೋರೈಸುವಷ್ಟು
ಉರಿಯಬೇಕು ದೀಪಕ್ಕೆ ಬತ್ತಿಯಾಗಿ
ಬತ್ತಿಯೊಂದಿಗೆ ಸ್ನೇಹಗಳಿಸಲಿಕ್ಕಲ್ಲ
ನೋವಿಗೆ ಉತ್ತರವಾಗಿ ನಾನೆಷ್ಟು ಉರಿಯುಬಲ್ಲೆ ಎಂದು
ನನ್ನಲ್ಲಿ ನಾನೇ ಪ್ರಶ್ನಿಸಿಕೊಳ್ಳುವುದಕ್ಕಾಗಿ
ಒಮ್ಮೆ ಹೂವಿನ ಮಕರಂದವನ್ನೆಲ್ಲಾ
ತೊಟ್ಟು ಬಿಡದೇ ಹೀರಬೇಕು ಜೇನಾಗಿ
ಮಕರಂದವನ್ನೆಲ್ಲಾ ಸಿಹಿ ತುಪ್ಪವನ್ನಾಗಿಸಲಲ್ಲ
ನನ್ನ ಮನಸೆಷ್ಟು ಸಿಹಿ ಎಂದು
ನನ್ನನ್ನು ನಾನೇ ಮೆಚ್ಚಿಸಿಕೊಳ್ಳುವುದಕ್ಕಾಗಿ
ಒಮ್ಮೆ ಮನದುಂಬಿ ಹರಿಯಬೇಕು
ಹಾಲಿನ ನೊರೆಯಂತಿರುವ ನೀರಾಗಿ
ನೀರಿನಾಳದಲಿರುವ ಮೀನಾಗುವುದಕ್ಕಲ್ಲ
ನಿನ್ನ ನೆನಪುಗಳಲ್ಲಿರುವ ಮುತ್ತನ್ನು
ನನ್ನಲ್ಲಿ ನಾನೇ ಹುದುಗಿಸಿಕೊಳ್ಳುವುದಕ್ಕಾಗಿ
ಒಮ್ಮೆ ಮನದಣಿಯೇ ಸುತ್ತಬೇಕು
ಜಗದ ಸಂಚಾರಿಯಾಗಿ
ಯಾರೊಂದಿಗೋ ನನ್ನ
ಗುರುತಿಸಿಕೊಳ್ಳಲಾಗಿ ಅಲ್ಲ
ನನ್ನಲ್ಲಿ ನನ್ನನ್ನು ಕಂಡುಕೊಳ್ಳುವುದಕ್ಕಾಗಿ
ನನ್ನಲ್ಲಿಯ ನನ್ನನ್ನೇ ಮೀರಿಸುವುದಕ್ಕಾಗಿ..
- ಉಷಾ ಬೆಕ್ಮನೆ..
***** ಅಪ್ಪ *****

ಹೇಳಲಾಗದ ಎಷ್ಟೋ ಸಾಲು ಮನದಲ್ಲಿದೆ
ಹೇಳಲು ಹೋದರೆ ಕಂಬನಿ ಕಣ್ಣೀರ ತುಂಬುತ್ತದೆ
ಏನ ನೀಡಲಿ ನಾ ನೀನಿತ್ತ ಬದುಕಿಗೆ
ನೀನಿತ್ತ ಪ್ರೀತಿಗೆ, ನಿನ್ನ ತ್ಯಾಗಕೆ

ಕೈ ಹಿಡಿದು ನನ್ನ ಬದುಕಿಗೆ
ದಾರಿ ದೀಪವಾದೆ ನೀನು
ಜೊತೆಯಾಗಿ ನಿಂತರೆ ನೀನು
ಜಗವನೇ ಗೆಲ್ಲುವೆ ನಾನು

ನಿನ್ನ ನೆನೆಸಿಕೊಂಡಾಗೆಲ್ಲ ನನ್ನಲ್ಲಿ
ಮುಗುಳ್ನಗೆಯ ಹೊತ್ತು ತರುವೆ
ಹಸುಗೂಸ ಮುಗ್ದ ಮಗುವಾಗಿ
ಮತ್ತೆ ನನ್ನ ಮಡಿಲಲ್ಲಿ ಮಲಗುವೆ

ಅಪ್ಪ, ನೀನೆಂದರೆ ಪದಗಳಿಗೇ
ನಿಲುಕದ, ಚಂದದ ಅನುಭವ
ಎಷ್ಚು ವಂದಿಸಿದರೂ ಸಾಲದಷ್ಟು
ದೇವರು ಕೊಟ್ಟಿರುವ ವರ

ನಿನ್ನಂತೇ ಪ್ರೀತಿಸಿಲ್ಲ ಯಾರೂ ನನ್ನ
ಯಾರೂ ಕದಿಯಲಾಗದು ನಿನ್ನ ಪ್ರೀತಿಯನ್ನ
ನೀನಿಲ್ಲದೇ ನನ್ನ ಅಸ್ತಿತ್ವವೇ ಶೂನ್ಯ
ನಿನಗೆಂದೇ ಮುಡಿಪಿಡುವೆ ನನ್ನ ಜೀವವನ್ನ....

          - ಉಷಾ ಬೆಕ್ಮನೆ...


Friday, 1 April 2016

ನಮ್ಮ ಬಾಂಧವ್ಯಕ್ಕೂ ಒಂದು ಹೆಸರಿರಲಿ


ನಿಜ, ಎಂದಿನಂತಿಲ್ಲ ಈ ಬೆಳಗು. ನಿನ್ನ ನನ್ನ ನಂಟಿನ ಕೊಂಡಿ ಕಳಚಿ ಒಂದು ಸಂವತ್ಸರವೇ ಕಳೆದುಹೋಯ್ತಲ್ಲೋ ಹುಡುಗ, ಇಂದು ಯಾಕೋ ತುಂಬಾ ನೆನಪಾಗ್ತಿದೀಯಾ..ಇವತ್ತಿನ ದಿನನೂ ಮರ್ತಿದೀಯಾ ನೀನು ಅಂದ್ರೆ ನಂಗೆ ನಂಬೋಕಾಗ್ತಿಲ್ಲ.. ಈ ದಿನಕ್ಕೋಸ್ಕರ ವಾರವಿಡೀ ಪ್ಲಾನ್ ಮಾಡಿ ಒಂದ್ ಒಳ್ಳೆ ಲೋಕೆಶನ್ ನೋಡಿ ಅಲ್ಲಿ ಕೆಂಪು ಗುಲಾಬಿ ಒಂದಿಷ್ಟ್ ಚೆಂದನೆಯ ಬಳೆಗಳ ಜೊತೆ ನನ್ ಬರ್ತಡೆಗೆ ಎಲ್ರಿಗಿಂತ ಫಸ್ಟ್ ವಿಷ್ ಮಾಡ್ತಿದ್ದ ಜೀವದ ಗೆಳೆಯ ನೀನು...

ನಾವು ಹುಟ್ಟಿದ್ದು ಒಂದೇ ದಿನ, ಒಂದೇ ಹಾಸ್ಪಿಟಲ್,ಒಂದೇ ರೂಮ್.. ಆದರೆ ನಂಗಿಂತ ಅರ್ಧಗಂಟೆ ಬೇಗ ಹುಟ್ಟಿದ್ದೆ ನೀನು.. ಆ ಕ್ಷಣಕ್ಕೆ ನಮ್ಮಿಬ್ಬರ ಮನೆಯವ್ರು ತುಂಬಾ ಆತ್ಮೀಯರಾಗಿಬಿಟ್ಟಿದ್ರು.. ಯಾಕಂದ್ರೆ ನನ್ ಅಪ್ಪ ಅಮ್ಮಂಗೆ ಹುಡ್ಗ ಬೇಕಿತ್ತು, ನಿನ್ ಅಪ್ಪ ಅಮ್ಮಂಗೆ ಹುಡ್ಗಿ ಬೇಕಿತ್ತು. ಎರಡೂ ಆಯ್ತಲ್ಲ ಅದಿಕ್ಕೆ..

ಅಲ್ಲಿಂದ ಶುರುವಾಗಿದ್ದು ನಮ್ಮ ಬಾಂಧವ್ಯ.. ನಂಗೆ ಎಲ್ಲಾದ್ರಲ್ಲೂ ನೀನೇ ಬೇಕು. ಅಳೋಕೂ ನೀನೇ, ನಗೋಕೂ ನೀನೆ.. ಮನಸಿನ ಎಲ್ಲಾ ಭಾವನೆಗಳನ್ನ ನಾ ಹೇಳ್ದಿದ್ರೂ ಹಿಡಿಹಿಡಿಯಾಗಿ ಅರ್ಥಮಾಡ್ಕೋಳೋನು ನೀನೊಬ್ನೇ ಕಣೋ..ಇಲ್ಲಿತನ್ಕ ಶಿಶಿರ ಕೂಡ ಅಷ್ಟು ಅರ್ಥ ಮಾಡ್ಕೋಂಡಿಲ್ಲ..

ಬಾಲ್ಯದಿಂದನೂ ಒಟ್ಟಿಗೆ ಓದಿದ್ದ ನಮಗೆ ಬೇರೆ ಫ್ರೆಂಡ್ಸ್ ಮಾಡ್ಕೊಳೋ ಪ್ರಮೇಯಾನೆ ಬ೦ದಿರ್ಲಿಲ್ಲ. ನಂಗೆ ಬೆಂಗಳೂರಲ್ಲಿ ನಿಂಗೆ ಪುಣೆಯಲ್ಲಿ ಜಾಬ್ ಆದಾಗ ಇಬ್ರೂ ಎಷ್ಟು ಖುಷಿ ಪಟ್ಟಿದ್ವೋ, ಹೊರಡೋ ದಿನ ಬಂದಾಗ ಒಬ್ರ್ನೋಬ್ರು ತಬ್ಕೊಂಡು ಅಷ್ಟೇ ಅತ್ತಿದ್ವಿ.
ಆವತ್ತು ಮನ್ಥ್ಲಿ ಒಂದ್ಸಲ ಬಂದು ಮೀಟ್ ಮಾಡ್ತೀನಿ ಕಣೇ ಅಂತ ಕೊಟ್ಟ ಮಾತನ್ನ ಎಷ್ಟು ಚೆನ್ನಾಗಿ ನಿಭಾಯಸ್ತಾ ಇದಿಯೋ, ನೀನಿಲ್ಲ ಅಂದ್ರು ನಿನ್ನ ನೆನಪಂತೂ ಯಾವತ್ತೂ ನನ್ಜೋತೆಗೆ ಇದ್ಯೋ. ಆ ಒಂದು ಭೇಟಿಯಲ್ಲಿ ಅದೆಷ್ಟು ನೋವು, ಪ್ರೀತಿ, ಖುಷಿಯ ವಿನಿಮಯವಾಗಿರ್ತಿತ್ತು.

ದೀಪಾವಳಿಗೆಂದು ಮನೆಗೆ ಹೋದಾಗ ಮನೆಯಲ್ಲಿ ಮದ್ವೆ ಪ್ರಸ್ತಾಪ ಇಟ್ಟಿದ್ರು.  ಇಬ್ಬರೂ ಮನೆಯವರೊಂದಿಗೆ ಮುನಿಸಿಕೊಂಡು ಆ ಗುಡ್ಡದಂಚಲ್ಲಿ  ಎಷ್ಟು ಬಿಕ್ಕಿ ಬಿಕ್ಕಿ ಅತ್ತು ಮನಸು ಹಗುರ ಮಾಡ್ಕೋ೦ಡ್ವಿ.
ಅದ್ಯಾಕೋ ಗೊತ್ತಿಲ್ಲ, ನಮ್ಮ ಬಾಂಧವ್ಯ ಸ್ನೇಹನ ಮೀರಿದ್ದಾದ್ರೂ ಪ್ರೀತಿ ಯಾಕೋ ನಮ್ಮಿಬರ ಹತ್ರನೂ ಸುಳಿದಿರಲಿಲ್ಲ. ಚಿಕ್ಕೊರಾಗಿದ್ದಾಗಿನಿ೦ದಲೂ ಎಲ್ಲದನ್ನೂ ಶೇರ್ ಮಾಡ್ಕೊಂಡೇ ಬೆಳದ್ರೂ ಮದ್ವೆ ಅನ್ನೋ ಬಂಧ ನಮ್ಮಿಬ್ಬರ ಬಾಂಧವ್ಯಕ್ಕೆ ಸೂಕ್ತವಾಗಿರ್ಲಿಲ್ಲ. ಸುನೀಗೆ ನಾನೇ ಗಂಡು ಹುಡ್ಕ್ತೀನಿ ನಿಮಗೆ ಆ ಟೆನ್ಶನ್ ಬೇಡ ಅಂತ ಅಪ್ಪ ಅಮ್ಮನ್ನ ಒಪ್ಸ್ದಾಗ ನಾನದೆಷ್ಟು ಕುಣಿದು ಕುಪ್ಪಳ್ಸಿದ್ದೆ. ಅದ್ಯಾಕೋ ಆ ಕ್ಷಣಕ್ಕೆ ಅಮ್ಮಂಗಿಂತ ಹತ್ರ ಅಗ್ಬಿಟ್ಟಿದ್ದೆ ನೀನು.

ಅದೊಂದು ದಿನ ಬೆಳಿಗ್ಗೆ ಆಫೀಸ ಹೊರಡೋಕೆ ರೆಡಿ ಆಗ್ತಿದ್ ನಂಗೆ ಕಾಲ್ ಬಂತು ನಿ೦ದು. ಸುನೀ ನಿಂಗೆ ಒಂದು ಸರಪ್ರೈಸ್ ಇದೆ ಕಣೇ ರೂಮ್ಗೆ ಬರ್ತಿದೀನಿ ಅಂದ ಹತ್ತು ನಿಮಿಷಕ್ಕೆ ರೂಮ್ಗೆ ಬಂದು ಬಿಟ್ಟಿದ್ದೆ. ನಿನ್ನ ಹಿಂದಿದ್ದವ್ನನ್ನ ಇವನು ಶಿಶಿರ್ ಅಂತ ಕಣೇ, ನಿಂಗೆ ಒಳ್ಳೆ ಜೋಡಿ ಅಂತ ಪರಿಚಯ ಮಾಡಿಸ್ದಾಗ ನಾಚಿ ನೀರಾಗಿ ಹೊಗಿದ್ದೆ.

ನಾವಿಬ್ರು ಒಬ್ರ್ನೋಬ್ರು ಒಪ್ಪಿದ್ಮೇಲೆ ಮನೆಯವರನ್ನು ಒಪ್ಸ್ದೆನೀನು. ನಿಶ್ಚಿತಾರ್ಥನು ಫಿಕ್ಸ್ ಆಯ್ತು. ಅದೆಷ್ಟು ಕುಣಿದು ಕುಪ್ಪಳಿಸಿಬಿತ್ತಟ್ಟಿದ್ದೆ ನೀನು.... ನಿಂದೇ ಎಂಗೇಜ್ಮೆಂಟ್ ಅನ್ನೋ ಅಷ್ಟು ಖುಷಿಯಿಂದ ಎಲ್ಲ ಜವಾಬ್ದಾರಿ ವಹಿಸಿಕೊಂಡು ಎಂಗೇಜ್ಮೆಂಟ್  ಕೂಡ ಮುಗಿಸಿಬಿತ್ತಟ್ಟಿದ್ದೆ.....

ನಾನು ಶಿಶಿರ್ ಚೆನಾಗೇ ಇದ್ವಿ, ಹಂಗೆ ನಿನಗೋಸ್ಕರ ಅಂತ ಹುಡ್ಗೀನೋ ಹುಡ್ಕಿದ್ದೆ, ಅದ್ಯಾವ ಕೆಟ್ಟ ದೃಷ್ಟಿ ಬಂದು ಬಡಿತೋ ಗೊತ್ತಿಲ್ಲ, ಎಲ್ಲ ಚೆನಾಗೆ ಇದ್ದ ನಮ್ಮ ಸಂಬಂಧ ಮೂರಾಬಟ್ಟೆ ಆಗೊಯ್ತೂ...
ನಿಂಗೆ ಹುಡ್ಗಿನ ಪರಿಚಯ ಮಾಡ್ಸೋಣ ಅಂತ ಕಾಲ್ ಮಾಡಿದ್ರೆ ನೀನು ರಿಸಿವ್ ಮಾಡಲೇ ಇಲ್ಲ, ಎರಡು ದಿನದವರೆಗೂ ರಿಂಗ್ ಆಗತಾನೆ ಇತ್ತು ಆದ್ರೆ ನಿನ್ನ ಸುಳಿವೇ ಇರ್ಲಿಲ್ಲ. ಕಡೆಗೊಂದು ದಿನ ನಂಬರ್ ನಾಟ್ ವಾಲಿಡ್ ಅಂತ ಬರೋಕೆ ಶುರು ಆಯ್ತು.  ನಿಮ್ ಮನೆಗೆ ಕಾಲ್ ಮಾಡಿದ್ರೆ ಯಾರ್ಗು ಹೇಳ್ದೆ ಕೇಳ್ದೆ ಮನೇನೆ ಖಾಲಿ ಮಾಡಿ ಬಿಟ್ಟಿದ್ರು.

ಆವತ್ತು ನಾನು ಶಿಶಿರ್ ಜೊತೆ ಇದ್ದಾಗ ನಾವು ಯಾವಾಗಲು ಭೇಟಿ ಮಡ್ತಿದ್ವಲ್ಲ, ಅಲ್ಲೇ ನಿನ್ನ ನೋಡದೆ,ನನ್ನ ಖುಷಿಗೆ ಪಾರವೇ ಇರ್ಲಿಲ್ಲ. ಆದ್ರೆ ನೀನು ಮಾತ್ರ ನನ್ನ ನೋಡಿದರು ನೋಡದೆ ಇರೋ ತರ ಮಾಯಾ ಅಗ್ಬಿಟ್ಟಿದ್ದೆ. ನೀನ್ಯಾಕೆ  ಹಿಂಗೆ ಮಾಡದೆ ಅಂತ ನಾನು ಇನ್ನೂ ಯೋಚಸ್ತಾನೇ ಇದೀನಿ ಕಣೋ, ಕಾರಣ ಮಾತ್ರ ಸಿಕ್ಕಿಲ್ಲ.

ಶಿಶಿರ್ ಚಿನ್ನದಂಥ ಹುಡ್ಗ, ನನ್ನ ಕಣ್ರೆಪ್ಪೆ ಹಂಗೆ ಕಾಪಾಡ್ತಾನೆ.. ಆದರೆ ಅವನ ಪ್ರೀತಿಗೂ ನಮ್ಮ ಬಾಂಧವ್ಯ ಮರೆಸೋ ಶಕ್ತಿ ಇಲ್ಲ ಕಣೋ. ನೀನಿಲ್ಲದ ಈ ಬರ್ತಡೇ  ತುಂಬಾ ಸಪ್ಪೆ ಅನಸ್ತಾ ಇದೆ ಕಣೋ.... ಒಂದು ವರ್ಷಕ್ಕಾಗೊವಷ್ಟು ಪ್ರೀತಿ, ನೋವು, ಖುಷಿ, ಮಾತುಗಳನ್ನ ಗಂಟು ಕಟ್ಟಿ ಇಟ್ಟಿದೇನೋ. ನಿಂಗೆ ಅಂತ ಹುಡ್ಕಿದ ಹುಡ್ಗೀನ ನಿನ್ನ ಕೈಗೆ ಒಪ್ಸೋಕೆ ತುದಿಗಾಲಲ್ಲಿ ನಿಂತಿದೀನಿ. ನನ್ನ ಮದ್ವೆಯಲ್ಲಿ, ನನ್ನ ಬಾಲ್ಯದ ಗೆಳತಿ ಮದ್ವೆ ಅಂತ ನೀನು ಕುಣಿದು ಕುಪ್ಪಳಿಸೋದನ್ನ ನಾನು ನೋಡಬೇಕೋ..
ಹಂಗೆ ನಮ್ ಇಷ್ಟ್ ವರ್ಷದ ಸ್ನೇಹಕ್ಕಿಂತ ಮಿಗಿಲಾದ ಬಾಂಧವ್ಯಕ್ಕೆ ಒಂದು ಹೆಸರಿಡ್ಬೇಕೂ ಹುಡ್ಗ, ಅದ್ರ ಜವಾಬ್ದಾರಿ ಮಾತ್ರ ಪೂರ್ತೀ ನಿಂದೇ....
ನಮ್ಮ ಬಾಂಧವ್ಯಕ್ಕೋ ಒಂದು ಹೆಸರಿರಲಿ....

ಡೋರ್ ಬೆಲ್ ರಿಂಗ್ ಆಗ್ತಿದೇ, ಪ್ರತೀ ವರ್ಷದಂತೆ ಒಂದು ಸರ್ಪ್ರಿಸ ಪ್ಲಾನ್, ಕೆಂಪು ಗುಲಾಬಿ, ಒಂದಿಷ್ಟು ಬಳೆ.... ಮತ್ತೆ ಒಂದು ಸುಂದರ ಹೆಸರಿನೊಂದಿಗೆ ನೀನೇ ಬಂದಿರ್ತೀಯ ಅನ್ನೋ ನಿರೀಕ್ಷೆಯಲ್ಲಿ........        

Monday, 28 March 2016

ಸಪ್ತಸಾಗರದಾಚೆಯೆಲ್ಲೋ....

ತನ್ನವರೆನ್ನುವವರು ಯಾರೂ ಇಲ್ಲದ ಅಪರಿಚಿತ ಅಮೇರಿಕಾಗೆ ಪ್ರಕೃತಿ ಬಂದು ಐದು ವರ್ಷ... ಅವಳ ಮನಸೆಲ್ಲಾ ಖಾಲಿ ಖಾಲಿಯಾಗಿತ್ತು. ಮುಸ್ಸಂಜೆಯಲಿ ರವಿ ಶಶಿಯಾಗಮನಕ್ಕಾಗಿ ಹಾದಿ ತೆರವುಗೊಳಿಸುತ್ತಾ ನೆರಳ ತರಿಸುತಲಿದ್ದ. ರವಿಯ ಹೊಂಬಣ್ಣದ ಕಿರಣಗಳು ಸಾಗರವನ್ನು ತೋಯಿಸುತ್ತಿರುವುದನ್ನು ಕಿಟಕಿಯಿಂದಲೇ ನೋಡುತ್ತಿದ್ದ ಪ್ರಕೃತಿ ಮೌನಿಯಾದಳು.. 
ಪ್ರಕೃತಿ ಹೆಸರಿಗೆ ತಕ್ಕಂತೆ ಪ್ರಕೃತಿ ಪ್ರೇಮಿ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಮಲೆನಾಡಿನ ಸುಂದರ ಪ್ರಕೃತಿಯ ಒಂದು ಪುಟ್ಟ ಹಳ್ಳಿಯಲ್ಲಿ ಡಾಕ್ಟರ್ ಆಗಿ ಅಲ್ಲಿ ಜನರ ಕ್ಷೇಮ ನೋಡಿಕೊಂಡು ಹಚ್ಚ ಹಸುರಿನ ಮಧ್ಯೆ ಗುಲಾಬಿಯಂತೆ ಕಂಗೊಳಿಸಬೇಕಿತ್ತು...

ಪ್ರಕೃತಿಗೆ ಚಿಕ್ಕಂದಿನಿಂದಲೂ ಡಾಕ್ಟರ್ ಆಗಿ ಅವರ ಹಳ್ಳಿಯಲ್ಲಿ ಇಲ್ಲದಿರುವ ವೈದ್ಯಕೀಯ ಸೌಲಭ್ಯವನ್ನು ತಾನೇ ನೀಗಿಸಬೇಕೆಂಬ ಆಸೆ.. ಜಿಟಿಪಿಟಿ ಸೋನೆ ಮಳೆ ಬಂತೆಂದರೆ ಸಾಕು ಮನೆಯಲ್ಲಿ ಕಾಲೇ ನಿಲ್ಲುತ್ತಿರಲಿಲ್ಲ. ಪ್ರಕೃತಿಯ ಪ್ರತಿಯೊಂದು ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಸಂವೇದನಶೀಲೆ.. ಅವಳ ಯಾವುದೇ ಆಸೆಗೂ ಅಡ್ಡಿ ಬರದೆ ಅವಳಿಷ್ಟದಂತೆ ಎಲ್ಲವನ್ನೂ ಬೆಂಬಲಿಸುವ ಅಪ್ಪ-ಅಮ್ಮ..

ಹಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಪಟ್ಟ ಕಾಲೇಜು ಇಲ್ಲದ ಕಾರಣ ಅನಿವಾರ್ಯವಾಗಿ ಪ್ರಕೃತಿ ಬೆಂಗಳೂರಿಗೆ ಬಂದಳು. ಅಪ್ಪ-ಅಮ್ಮನ ಮುದ್ದಿನ ಕೂಸಾಗಿ ಹಕ್ಕಿಯಂತೆ ಸ್ವಚ್ಛಂದವಾಗಿ ಬದುಕಿದ ಪ್ರಕೃತಿಗೆ ಬೆಂಗಳೂರಿಗೆ ಒಗ್ಗಿಕೊಒಗ್ಗಿಕೊಳ್ಳುವುದು ಕಷ್ಟವಾಗಿತ್ತು. ಪರಿಚಯವಿಲ್ಲದ ಊರು ತರುವ ಒಂಟಿತನ, ಇಂಗ್ಲೀಷ್ ಮಾಧ್ಯಮಕ್ಕೆ ಹೊಂದಿಕೊಳ್ಳುವ ಕಷ್ಟ ಇದಕ್ಕೆಲ್ಲ ಜೊತೆಯಾಗಿದ್ದು ಆಕಸ್ಮಿಕವಾಗಿ ಪರಿಚಯವಾದ ರವಿ... ಪರಿಚಯ ಸ್ನೇಹವಾಗಲು, ಸ್ನೇಹ ಪ್ರೀತಿಯಾಗಲು ಹೆಚ್ಚೇನು ದಿನ ಬೇಕಾಗಲಿಲ್ಲ.. ಇಬ್ಬರ ಮನೆಯಲ್ಲೂ ತಿಳಸಿ ಎಲ್ಲರ ಒಪ್ಪಿಗೆಯೊಂದಿಗೆ ಮದುವೆಯೂ ಕೂಡ ಕಣ್ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ಮುಗಿದೇಹೋಗಿತ್ತು. ಪ್ರಕೃತಿಯ ವಿದ್ಯಾಭ್ಯಾಸವೂ ಅಪೂರ್ಣವಾಯಿತು...

ಅಷ್ಟರಲ್ಲಿ ಅಮೇರಿಕಾದ ಪ್ರತಿಷ್ಠಿತ ಕಂಪನಿಯ ಮಾಲಿಕನಾದ ರವಿಯ ತಂದೆ ಹೃದಯಾಘಾತವಾಗಿ ಮರಣಹೊಂದಿದ್ದರಿಂದ ಎಲ್ಲಾ ಜವಾಬ್ದಾರಿಯೂ ರವಿಯ ಹೆಗಲಿಗೇ ಬಿತ್ತು. ರವಿಯ ಪ್ರೀತಿಯ ಮಳೆಯಲ್ಲಿ ನೆನೆಯುತ್ತಿದ್ದವಳಿಗೆ ತನ್ನಾಸೆ, ಕನಸುಗಳ ಪರಿವೇ ಇದ್ದಂತಿರಲಿಲ್ಲ. ರವಿಯಲ್ಲಿಯೇ ತನ್ನ ಖುಶಿ ಕಾಣುತ್ತಿದ್ದವಳು ತನ್ನಾಸೆ ಕನಸನ್ನ ಅಡಿಗೆ ಹಾಕಿ ರವಿಯೊಂದಿಗೆ ಅಮೇರಿಕಾಗೆ ಹಾರಿದಳು..
ಎಲ್ಲವೂ ಚೆನ್ನಾಗೇ ಇತ್ತು... ಬಯಸಿ ಬಯಸಿ ಪಡೆದ ಪ್ರೀತಿಯ ಇನಿಯನ ಸಾನಿಧ್ಯ, ಹೊಸ ಊರು, ಹೊಸ ಜಾಗ. ಬರುಬರುತ್ತಾ ರವಿ ಕೆಲಸದಲ್ಲಿ ತೊಡಗಿದಾಗ ಒಂಟಿತನ, ಅಸಹನೀಯತೆ ಭುಗಿಲೇಳಲಾರಂಭಿಸಿತು. ಮುದುಡಿಹೋಗಿದ್ದ ಆಸೆ, ಕನಸುಗಳೆಲ್ಲ ಪ್ರಕೃತಿಯ ಮನದಲ್ಲೇ ಅರಳಲಾರಂಭಿಸಿತ್ತು. ಆದರೆ ಅದನ್ನು ಹೊಸಕಿ ಹಾಕುತ್ತಲೇ ಕಾಲ ಕಳೆದಿದ್ದಳು..

ಕಿಟಕಿಯೀಚೆಗೆ ಕುಳಿತು ರವಿ ಮರೆಯಾಗುವುದನ್ನೇ ನೋಡುತ್ತಿದ್ದ ಪ್ರಕೃತಿಯ ಮೌನವಾಗಿದ್ದ ಮನದಲ್ಲಿ ಸಾವಿರಾರು ಪ್ರಶ್ನೆಗಳ ಸರಮಾಲೆಗಳ ಮೆರವಣಿಗೆಯಾಗತೊಡಗಿತ್ತು. ಈ ಐದು ವರ್ಷಗಳ ದೀರ್ಘಾವಧಿಯಲ್ಲಿ ನಾನು ಸಾಧಿಸಿದ್ದಾದರೂ ಏನು ? ರವಿಯ ಪ್ರೀತಿಯಿಂದಲೂ ನನ್ನ ಕನಸನ್ನು ಮರೆಸಲು ಆಗಿಲ್ಲವೇಕೆ ? ನನ್ನೆಲ್ಲಾ ಆಸೆ ಕನಸುಗಳು ಮೊಗ್ಗಾಗಿದ್ದಾಗಲೇ ಕಮರಿ ಹೋಗಿದ್ದೇಕೆ ? 
ಇಲ್ಲ.... ಇದಕ್ಕೆಲ್ಲ ಒಂದು ಅಂತ್ಯ ಹುಡುಕಲೇಬೇಕೆಂದು ಮನ ನಿರ್ಧರಿಸಿಬಿಟ್ಟಿತ್ತು. ಹುಟ್ಟಿದ ಮನೆ, ಪರಿಸರ, ಜೀವನದ ಆಸೆ, ಆಕಾಂಕ್ಷೆ ಕೈ ಬೀಸಿ ಕರೆಯತೊಡಗಿತ್ತು.....
ತನ್ನ ಮನದಾಳದ ಮಾತುಗಳನ್ನು ರವಿಯ ಜೊತೆ ಹೇಳಲೇಬೇಕೇಂದು ರೂಮಿನಿಂದ ಹೊರಹೋಗಲು ಹೆಜ್ಜೆ ಹಾಕಿದಳು....
ತನ್ನ ಇನಿಯೆಯಾಗಮನಕ್ಕಾಗಿ ಹಾದಿ ತೆರವುಗೊಳಿಸುತ್ತಿದ್ದ ರವಿ ಹೊಂಬಣ್ಣದಿಂದ ಮಿನುಗುತ್ತಿದ್ದ ರೂಮನ್ನು ಕರಿಯ ನೆರಳಲಿ ಮೀಯುವಂತೆ ಮಾಡಿ ಮರೆಯಾದ...
ಅದೇ ಕ್ಷಣ ಪ್ರಕೃತಿಯ ಫೋನು ರಿಂಗಣಿಸುತ್ತಿತ್ತು....
 "ಸಪ್ತ ಸಾಗರದಾಚೆಯೆಲ್ಲೋ


   ಸುಪ್ತ ಸಾಗರ ಕಾದಿದೆ....!!!"

Thursday, 24 March 2016

ಕವಿತೆ


ಕವಿತೆ

ನಾನು ನೆನಪುಗಳ ಪೋಣಿಸಿ 
ಕಡಲ ತೀರದಲ್ಲಿ ಗೀಚಿದ 
ಕವಿತೆಯ ನೀ ನೋಡದೇ 
ನನ್ನಿಂದ ದೂರಾಗಿ ಸಂವತ್ಸರವೇ
ಕಳೆದುಹೋದರೂ ಕವಿತೆ ಮಾತ್ರ
ಹಾಗೆಯೇ ಇದೆಯಲ್ಲ ಗೆಳೆಯಾ.....

ಪ್ರೀತಿಯ ರಂಗು



ಭಾವನೆಗಳ ನುಗ್ಗಾಟದಲ್ಲಿ ನೆಲಸೇರಿರುವ
ತರತರಹದ ಕುಂಚಗಳನು ಹೆಕ್ಕಿ ತಂದು
ರಂಗುರಂಗಿನ ಬಣ್ಣವ ತುಂಬಿ
ಮನದಲಿ ಚಿತ್ರವೊಂದನು ಬಿಡಿಸಬೇಕಿದೆ

ನನ್ನ ನಿನ್ನ ನಡುವೆ ಆಡದೇ
ಉಳಿದುಹೋದ ಮಾತುಗಳೆಲ್ಲಾ
ಒಂದಾಗಿ ಸೇರಿ ಮನದಲಿ
ಮೂಡುವ ಚಿತ್ರಕ್ಕೆ ಬಣ್ಣಬಣ್ಣದ
ಕಾರಂಜಿಯನೇ ಸುರಿಸಬೇಕಿದೆ

ನಿನ್ನ ಕಣ್ಣಿಂದ ಹೊಮ್ಮುವ
ಕನಸುಗಳಿಗೆ ನಾ ಬಣ್ಣವಾಗಿ
ಕನಸ ನೋಟದ ಅನುಭಾವಕೆ
ಕನಲಿ ಹೋಗಬೇಕಿದೆ

ಮನದ ಜಾಲಿಕೆಯಲ್ಲಿ ನಿನ್ನ
ಪ್ರೀತಿಯೆಂಬ ರಂಗುರಂಗಿನ
ಸಾವಿರ ಬಣ್ಣಗಳು ಮಿಂದೆದ್ದು
ಎಂದೂ ಮಾಸಿಹೋಗದ ಚಿತ್ರವಾಗಬೇಕಿದೆ....

ಮೋಹಕ ತಂಗಾಳಿಯಲಿ



ಮುಸ್ಸಂಜೆ ಮಬ್ಬಲ್ಲಿ ಇನಿಯನ
ಆಗಮನದ ನಿರೀಕ್ಷೆಯಲ್ಲಿರುವ
ಸಾಗರದ ಅಂಚಲಿ ಕುಳಿತು
ಮನಸೆಂಬ ಪುಸ್ತಕದಲ್ಲಿ ಬರೀ
ನಿನ್ನದೇ ಕವಿತೆ ಬರೆಯಬೇಕಿದೆ

ಮೋಹಕ ತಂಗಾಳಿಯಲಿ
ನೀಲನಭದಿ ಶಶಿಯು ಮೂಡಿ
ಸಾಗರದ ಅಂಚನ್ನು ಚುಂಬಿಸಲು
ನಿನ್ನ ಪ್ರೀತಿಯೆಂಬ ತಂತಿ ಮೀಟಿ
ಹೊಸ ರಾಗ ಹೊಮ್ಮಬೇಕಿದೆ

ಬೆಳದಿಂಗಳ ರಾತ್ರಿಯಲಿ ನಕ್ಷತ್ರಗಳು
ಮಿನುಗುತಿರುವಾಗ ಜಂಟಿಯಾಗಿ ಕೂತು
ಕೈಯೊಳಗೆ ಕೈ ಪೋಣಿಸಿ ಬೇಲಿ
ಹೆಣೆದು ಬೆರಳುಗಳ ಮಧ್ಯದ
ಖಾಲಿತನವನ್ನು ನೀ ತುಂಬಬೇಕಿದೆ

ಆಕಾಶದ ನೀಲಿಮೆಯಲ್ಲಿ ಮೂಡಿರುವ
ನಕ್ಷತ್ರಗಳನು ಬಳಸಿ ನನ್ನ ಕನಸಿಗೆ
ಜೀವ ತುಂಬಿ, ಭವಿತ್ಯದ
ಕವಲಿನಲ್ಲಿ ಮೂಡುವ ನಿನ್ನ
ಕನಸುಗಳಿಗೆ ಚಂದಾದಾರಳಾಗಬೇಕಿದೆ...