Friday 18 March 2016

ನಿಜವಾಗಲೂ ಸಂತೋಷ ಯಾವುದು?

                  ನಿಜವಾಗಲು ಸಂತೋಷ ಯಾವುದು?

             

ನಿಜವಾಗಲೂ ಸಂತೋಷ ಯಾವುದು ? ಬದುಕು ಒಂದು ರೀತಿಯ ಪಯಣ. ಈ ಪಯಣದಲ್ಲಿ ಬರುವ ತಿರುವುಗಳೇ ವಿಚಿತ್ರ. ನಮ್ಮ ಬದುಕಿನಲ್ಲಿ ಕೇವಲ ಗುರಿ ತಲುಪುವತ್ತಲೇ ದೃಷ್ಠಿ ಹರಿಸುವ ನಾವು ಸಣ್ಣ-ಪುಟ್ಟ ಸಂತೋಷದ ಕ್ಷಣಗಳನ್ನು ಅನುಭವಿಸುವತ್ತ ಗಮನ ಹರಿಸುವುದಿಲ್ಲವೇಕೆ?

ನಿಜ  ಏನೆಂದರೆ ಅಂಥ ಕ್ಷಣಗಳಲ್ಲೇ ನಿಜವಾದ ಸಂತೋಷ ಅಡಗಿರುತ್ತದೆ. 

 ಜೀವನ ಎಷ್ಟೇ ಕಷ್ಟ ಕೊಟ್ಟರೂ ಮಧ್ಯ ಮಧ್ಯದಲ್ಲಿ ಸಣ್ಣಪುಟ್ಟ ಸಿಹಿ ಕ್ಷಣಗಳನ್ನು ಕೊಡುತ್ತಲೇ ಇರುತ್ತದೆ. ಈ ತರಹದ ಸನ್ನಿವೇಶಗಳೇ ಬಹಳ ಸಲ ನಿರುತ್ಸಾಹದ ಮನಸುಗಳಿಗೆ ಚೈತನ್ಯದ ಚಿಲುಮೆಯನ್ನು ನೀಡುತ್ತದೆ. ಆದರೆ ಅದನ್ನು ಸ್ವೀಕರಿಸಿ ಅನುಭವಿಸುವ ಮನಸಿರಬೇಕಷ್ಟೇ.. 

ಗುರಿ ಮುಟ್ಟುವತ್ತಲೇ ಸದಾ ದೃಷ್ಠಿ ಹರಿಸಿದರೆ ಎಲ್ಲದರಲ್ಲೂ ಏಕತಾನತೆಯನ್ನು ಉಂಟು ಮಾಡುತ್ತದೆ.  ಯಾವಾಗಲಾದರೂ ನಡುನಡುವೆ ಬಂಧು ಬಾಂಧವರು, ಸ್ನೇಹಿತರು, ಮನೆಯವರೊಂದಿಗೆ ಒತ್ತಡ ತಂದುಕೊಳ್ಳದೇ ನಿರಾಳ ಮನಸ್ಸಿನಿಂದ ಕಾಲ ಕಳೆದರೆ ಸನ್ನಿವೇಶದ ಬದಲಾವಣೆಯಾದಂತೆ ಬೇರೆಯದೇ ಅನುಭವ ನೀಡುತ್ತದೆ. 

ಎಲ್ಲರೊಡನೆ ಬೇರೆಯದಿದ್ದರೆ ಎಲ್ಲರ ಮೂದಲಿಕೆಗೆ ಎದುರಾಗುವ ಸಂದರ್ಭ ಎದುರಿಸಬೇಕಾಗಬಹುದು. ಗುರಿ ತಲುಪುವ ಭರದಲ್ಲಿ ಎಲ್ಲವನ್ನು ದೂರವಿಟ್ಟರೆ ಮುಂದೊಂದು ದಿನ ಎಲ್ಲರು ಇದ್ದೂ ಕೂಡ ಒಂಟಿಯಾಗಿಯೇ ಬಾಳಬೇಕಾಗುವಂತ ಏಕತಾನತೆಯ ವಾತಾವರಣವೂ ಸೃಷ್ಟಿಯಾಗಬಹುದು. ಇರುವಾಗ ಸಂತೋಷದಿಂದ ಕಳೆಯದಿದ್ದರೆ ಮುಂದೆ ಅಥವಾ ಆ ವಸ್ತು ಬೇಕೆಂದಾಗ ಸಿಗುವುದಿಲ್ಲ.  

ಗುರಿ ಸಾಧನೆಗಾಗಿ ಸಣ್ಣ  ಪುಟ್ಟ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಬೇಕು ಎಂದಾಗಲಿ, ಅನುಭವಿಸಲೇ ಬಾರದು ಎಂಬ ನಿಯಮವೇನೂ ಇಲ್ಲವಲ್ಲ ? ಜೀವನದಲ್ಲಿ ಸಂತೋಷವನ್ನು ಹುಡುಕಿಕೊಂಡು ಅನುಭವಿಸಬೇಕಾದ ಜವಾಬ್ದಾರಿ ನಮ್ಮದೇ. "ಪ್ರತಿಯೊಂದರಲ್ಲೂ ಸಂತೋಷ ಇರುತ್ತದೆ. ಆದರೆ ಅದನ್ನು ಹುಡುಕಿ ಸಂತೋಷವನ್ನು ಅನುಭವಿಸುವ ಅಭಿರುಚಿ ಮತ್ತು ಮನೋಭಾವನೆ ನಮ್ಮಲ್ಲಿ ಕೂಡಿಸಿಕೊಳ್ಳಬೇಕು". 

ಮನುಷ್ಯನಾದವನಿಗೆ ಗುರಿ ಎನ್ನುವುದೊಂದು ಇರಲೇಬೇಕು. ಆದರೆ ಈ ಗುರಿಯಿಂದ ತನಗೂ, ಉಳಿದ ಮಾನವ ಕುಲಕ್ಕೂ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬೇಕು. ಸ್ವಹಿತಕ್ಕಾಗಿ ಪರಹಿತವನ್ನು ಹಾಳುಗೆಡುವ ಸಾಧನೆ ಸಾಧನೆಯೇ ಅಲ್ಲ. 

ಅದರಲ್ಲು ಮುಖ್ಯವಾಗಿ, ಕಂಡದ್ದೆಲ್ಲ ತನ್ನದಗಬೇಕೆಂಬ ದಾಹವೇ ಜೀವನದ ಸಂತೋಷದ ಕ್ಷಣಗಳನ್ನು ಅನುಬವಿಸಲು ಮುಳ್ಳಾಗಿರುವುದು. 

ಜೀವನವಿಡೀ ಸುಖ - ಸಂತೋಷ, ಯಶಸ್ಸು, ಪ್ರೀತಿ, ಐಶ್ವರ್ಯ, ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವ ನಾವು, ಬದುಕು ಎನ್ನುವಂತದ್ದು, ಸುಖ-ದು:ಖ, ನೋವು-ನಲಿವು, ಶಾಂತಿ-ಅಶಾಂತಿ ಎಲ್ಲವನ್ನು ಅರಗಿಸಿಕೊಂಡು ನಡೆಯುವಂತದ್ದು ಎಂಬ ಕಹಿ ಸತ್ಯವನ್ನು ಮರೆತುಬಿಟ್ಟ೦ತಿದೆ. 

ಸಂತೋಷ ಬಂದಾಗ ಹಿರಿ ಹಿರಿ ಹಿಗ್ಗಿ ಕುಣಿದು ಕುಪ್ಪಳಿಸುವ ನಾವು ಕಷ್ಟ ಬಂದಾಗ ಬೆನ್ನು ತೋರಿಸಿ ಓಡಿ ಹೋಗುವುದೇಕೆ ? ಗೊತ್ತಿಲ್ಲ.. ಆದರೂ ನಾವು ಬದುಕುವುದು ಮಾತ್ರ ಹಾಗೆಯೇ. ಬದುಕು ನಮಗೆ ಎರಡನ್ನು ಕಲ್ಪಿಸಿ ಕೊಡುತ್ತದೆ. ಆದರೆ ಕಷ್ಟವನ್ನು ಮಾತ್ರ ಸಹಿಸಲೊಲ್ಲೆವು. 

ಕಷ್ಟ ನಷ್ಟಗಳನ್ನು ಸಹಿಸಿಕೊಂಡು ಸಹಬಾಳ್ವೆ ನಡೆಸಲು ಬೇವು ಬೆಲ್ಲ ಹಬ್ಬ, ಎಳ್ಳು ಬೆಲ್ಲದ ಹಬ್ಬ, ಮನೋವಿಕಾರ ಸುಡುವ ಕಾಮದಾಹನ, ಮನದ ಅ೦ಧಕಾರ ಹೋಗಲಾಡಿಸಲು ದೀಪಾವಳಿ, ಹೀಗೆ ಸಾಲುಸಾಲಾಗಿ ಬರುವ ಹಬ್ಬಗಳನ್ನು ಸುಮ್ಮನೆ ಆಚರಿಸಿದರೆ ಮುಗಿಯಿತೇ ? 

ಹಬ್ಬಗಳ ಅರ್ಥಗಳನ್ನು ಮನದಟ್ಟು ಮಾಡಿಕೊಂಡು, ಜೀವನದಲ್ಲಿ ಸುಖ ದು:ಖಗಳೆರಡನ್ನು ಸಮಾನತೆಯಿಂದ ಸ್ವೀಕರಿಸಿದರೆ ಜೀವನ ಪರಿಪೂರ್ಣತೆ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ...... 

No comments:

Post a Comment