Tuesday, 15 March 2016

ಹನಿಗವನಗಳು

   ಹನಿಗವನಗಳು 

           ನಸುಕು 

ನಸುಕಿನ ಹನಿ ಮಂಜಿನ ನಡುವೆ, 
ಪಕ್ಷಿಗಳ ಕಲರವ ಕೇಳಿ 
ಬಾನಂಚಲ್ಲಿ ನೇಸರನು ಬೆಳಕ ಪಸರಿಸಿ 
ಇಬ್ಬನಿಯ ಕರಗಿಸಲು 
ತಂಪಾದ ತಿಳಿಗಾಳಿ ಮೋಡಿ 
ಮನದಲಿ ಹರುಷ ತುಂಬಿದೆ 
ಅರೆಮ೦ಪರಿನಲ್ಲಿರುವ ಕ೦ಗಳು 
ಇನ್ನೊಂದು ಶುಭದಿನದ 
ಸ್ವಾಗತಕ್ಕೆ ಸಜ್ಜಾಗಿದೆ...   


          ಅಗಲಿಕೆ 

ಅದೊಂದು ಸುಂದರ ಸಂಜೆಯಲಿ 
ಶಾಂತವಾಗಿರುವ ನದಿಯು 
ಅವರ ಅಗಲಿಕೆಗೆ ಸಾಕ್ಷಿಯಾಯಿತು... 
ಅವಳಿಗೆ ವಿದಾಯ ಹೇಳಿದ ಅವನು 
ತಿರುಗಿಯೂ ನೋಡದೆ ಹೊರಟೇ ಹೋದ 
ಅವಳು ಮೌನಿಯಾದಳು 
ಅವಳ ಮೌನದಲಿ ಕಾಡುವ ಕವಿತೆಯಾಗಿ 
ಅವನು ಕನಸಾಗಿಯೇ ಉಳಿದುಹೋದ... 


          ಬೆಳಕು

ಬೇಸರದಿ ಒಂಟಿಯಾಗಿ ಕುಳಿತವಳಿಗೆ 
ಇರುಳಿನಲ್ಲಿ ಕಂಡಿತೊಂದು ಬೆಳಕು 
ಸನಿಹ ಹೋಗಿ ನೋಡಿದರೆ ಎಲ್ಲ ಮಸುಕು ಮಸುಕು... 
ಬೆಳಕೇ ಇರದ ಬಾಳಿನಲ್ಲಿ 
ಎಂದು ಬರುವುದೋ ಬೆಳಕು... 


         ಬಿಂಬ 

ಸುರಿವ ಮಳೆಯ ಒಂದೊಂದು 
ಹನಿಗಳಲಿ ಕಂಡೆ ನಿನ್ನ ಬಿಂಬ 
ಮಳೆ ನಿಂತ ಮೇಲೆ ನಿನ್ನ ಕಣ್ಣಲ್ಲಿ 
ಕಂಡೆ ನನ್ನದೇ ಪ್ರತಿಬಿಂಬ...  

No comments:

Post a Comment