Thursday 17 March 2016

ಬಾಲ್ಯವೆಂಬ ಸುಂದರ ಸ್ವಪ್ನ

                                         



ಅದೆಷ್ಟು ಚಂದ ಆ ದಿನಗಳು. ನೆನೆಸಿಕೊಂಡಾಗೆಲ್ಲ ಮೈ ಮನಸ್ಸು ಹುಚ್ಚೆದ್ದು ಕುಣಿಯಲಾರ೦ಭಿಸುತ್ತೆ.  ಮನೆಯ ಮುಂದೆ ಅಮ್ಮ ನೆಟ್ಟ ಸಾಲು ಸಾಲು ಹೂವಿನ ಗಿಡಗಳು, ಪಕ್ಕದಲ್ಲೇ ಪೇರಳೆ ಮರ, ಅಲ್ಲೇ ಕೆಳಗಡೆ ಹಚ್ಚ ಹಸುರಿನಿಂದ ಕಂಗೊಳಿಸುವ ತೋಟ, ಗದ್ದೆ.... ಅಮ್ಮನ ಪ್ರೀತಿಯ ಬೈಗುಳ, ಜೊತೆಗಾರರೊಂದಿಗೆ ಶಾಲೆಗೆ ಹೋಗುವ ಸಂಭ್ರಮ, ಅವರೊಂದಿಗಿನ ಸಣ್ಣ ಪುಟ್ಟ ಕಿತ್ತಾಟ, ಇವೆಲ್ಲ ಮತ್ತೆ ಬೇಕೆ೦ದರು ಸಿಗುವುದಿಲ್ಲ ಏಕೆ ?
ದೊಡ್ಡವಳಾದ೦ತೆಲ್ಲ  ಮತ್ತೆ ಬಾಲ್ಯಕ್ಕೆ ತೆರಳುವ ಅದಮ್ಯ ಆಸೆ ನನಗೆ... 

ಮೆಟ್ರೋ ಸಿಟಿಗೆ ಬಂದು ಅದೆಷ್ಟು ಕಾಲವಾದರೂ ಇಲ್ಲಿನ ಜನ, ಇಲ್ಲಿನ ವಾತಾವರಣ, ಎಂದಿಗೂ ನನ್ನದೆನಿಸಲೇ ಇಲ್ಲ. ಒಂಟಿಯಾಗಿರಲು ಇಷ್ಟಪಡುತ್ತಿದ್ದ ನನಗೆ, ಇಲ್ಲಿನ ಒಂಟಿತನ ಅಸಹನೀಯವೆನಿಸುತ್ತದೆ. 
ಮನಸು ಈಗ ಯಾವಾಗಲು ಬಯಸುವುದು ಅದೊಂದೇ.. ಅದೇ ಬಾಲ್ಯ... 

ಎಲ್ಲದರಲ್ಲೂ ಖುಷಿಯನ್ನೇ ಕಾಣುವ ಆ ಬಾಲ್ಯವೆಲ್ಲಿ, ಎಲ್ಲದರಲ್ಲೂ ಖುಷಿಯನ್ನು ಹುಡುಕುವ ಈ ಕಾಲವೆಲ್ಲಿ ? ಬಾಲ್ಯ ಎನ್ನುವುದು ಒಂದು ಸುಂದರ ಸ್ವಪ್ನದಂತೆ ಕಾಡಿಸುತ್ತದೆ. ಬಾಲ್ಯದ ಆಟ, ಪಾಠ, ಖುಷಿ, ನಗು, ಅಳು, ಎಲ್ಲವೂ ಖುಷಿಯನ್ನು ಬೊಗಸೆಗೆ ತುಂಬಿ ತುಂಬಿ ಕೊಡುತ್ತದೆ. 

ಸೋನೆ ಮಳೆಯಲ್ಲಿ ಮಿಂದೆದ್ದು ಮುತ್ತಿನಂತೆ ಹೊಳೆದು ನೀರಿನ ಹನಿಗಳಿಂದ ಕಂಗೊಳಿಸುತ್ತಿರುವ ಹಚ್ಚ ಹಸುರಿನ ತೋರಣ. ಬಿಸಿಲಿನ ಧಗೆಗೆ ಕೆಂಡದಂತೆ ಕಾದಿರುವ ಇಳೆಗೆ ಮಳೆ ಬಂದು ಅಪ್ಪಿದಾಗ ಹೊರಹೊಮ್ಮುವ ಆ ಕಂಪು... ಆಹಾ !!! ಅದನ್ನೆಲ್ಲಾ ಈ ಕಾಂಕ್ರೀಟ್ ಸಿಟಿಯಲ್ಲಿ ಎಲ್ಲಿ ಹುಡುಕಲಿ ? ಅಪ್ಪನ ಬೈಗುಳ, ಅಮ್ಮನೊಂದಿಗಿನ ಹುಸಿಮುನಿಸು, ಅದನ್ನು ತಣಿಸಲು ಅಮ್ಮ ನೀಡುವ ಕೈತುತ್ತು, ತಂಗಿಯೊಂದಿಗಿನ ಜಗಳ, ಇವನ್ನೆಲ್ಲ ಪಕ್ಕದ ಅಪಾರ್ಟ್ಮೆಂಟ್ನಲ್ಲಿ ಯಾರಿದ್ದರೆಂದೇ ತಿಳಿಯದ ಈ ಅಪರಿಚಿತ ಊರಿನಲ್ಲಿ ಹೇಗೆ ಹುಡುಕಲಿ ? ಸಂಜೆಯಾಗುತ್ತಿದ್ದಂತೆ ಮನೆಯ ಮುಂದೆ ಹಾರಿ ಬರುವ ಚಿಟ್ಟೆಯನ್ನು ಕಷ್ಟವಾದರೂ ಇಷ್ಟಪಟ್ಟು ಹಿಡಿದದ್ದು, ಚಿನ್ನಿ-ದಾಂಡು ಆಟದಲ್ಲಿ ಮೋಸ ಮಾಡಿ ಅರ್ಧದಲ್ಲೇ ಆಟ ಬಿಟ್ಟು ಹೋಗಿದ್ದು, ಪಕ್ಕದಮನೆಯವರ ತೋಟಕ್ಕೆ ನುಗ್ಗಿ ಮಾವಿನಕಾಯಿ ಬಡಿದು ಉಪ್ಪಿನೊಂದಿಗೆ ತಿನ್ನುತ್ತಿರುವಾಗ ಅವರಿಗೆ ಸಿಕ್ಕುಬಿದ್ದಿದ್ದು, ಇಂತಹ ಮೋಜಿನ ಕ್ಷಣಗಳನ್ನು ಈ ಬ್ಯುಸಿ ಸಿಟಿಯಲ್ಲಿ ನಾ ಹೇಗೆ, ಎಲ್ಲಿ ಹುಡುಕಲಿ ? ಯಾವಾಗೆಂದರೆ ಆವಾಗ ಕಾಡುವ ಈ ಬಾಲ್ಯದ ನೆನಪುಗಳನ್ನು ಎಲ್ಲಿ ತು೦ಬಿಸಿಡಲಿ ?

ಮನಸಿನಲ್ಲಿ ಒಳಗೊಂದು ಹೊರಗೊಂದು ಇದ್ದು, ಎದುರಿಗೆ ಕೃತಕ ನಗೆಯ ಮುಖವಾದ ಧರಿಸಿ ಬಾಳುವ ಈ ಬದುಕು ಬೇಸರ ತರಿಸಿದೆ. 
ಬಾಲ್ಯದ ದಿನಗಳು ಮತ್ತೆಂದೂ ಬರಲಾರದೆ೦ಬ ಕಟುಸತ್ಯ ತಿಳಿದಿದ್ದರೂ ಸಹ ಬಾಲ್ಯವೆಂಬ ಸುಂದರ ಸ್ವಪ್ನದ ನಿರೀಕ್ಷೆಯಲ್ಲಿ .........  

No comments:

Post a Comment